ನೀರುಗೋಣಿಸೊಪ್ಪು -
ಸ್ಕ್ರಾಫುಲೇರಿಯೇಸೀ ಕುಟುಂಬಕ್ಕೆ ಸೇರಿದ ಏಕವಾರ್ಷಿಕ ಸಸ್ಯ. ಇಲಿಸ್ಯಾಂತಸ್ ಇದರ ಶಾಸ್ತ್ರೀಯ ಹೆಸರು. ಇದು ಉತ್ತರ ಹಾಗೂ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕ, ಭಾರತದಲ್ಲಿ ಪಂಜಾಬಿನಿಂದ ಅಸ್ಸಾಮ್‍ವರೆಗೆ ಹಾಗೂ ದಕ್ಷಿಣ ಭಾರತದಲ್ಲಿ ಕಾಣದೊರೆಯುತ್ತವೆ. ಜಲಸಮೃದ್ಧ ಪ್ರದೇಶಗಳಲ್ಲಿ ಇದು ಬಲುಸಾಮಾನ್ಯ. ಇದರ ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಚಿಕ್ಕವು. ಒಂಟೊಂಟಿಯಾಗಿ ಎಲೆಗಳ ಕಂಕುಳಲ್ಲಿ ಅರಳುವುವು. ಪ್ರತಿಹೂವಿನಲ್ಲಿ ಐದು ಹಾಲೆಗಳುಳ್ಳ ಪುಷ್ಪಪಾತ್ರೆ, ಇರ್ತುಟಿಯಾಕಾರದ ದಳಸಮೂಹ. ಎರಡು ಕೇಸರಗಳು, ಎರಡು ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ. ಕೇಸರಗಳಲ್ಲಿ ಒಂದು ಮಾತ್ರ ಫಲವಂತವಾಗಿದೆ. ಇನ್ನೊಂದು ಬರಡಾಗಿದ್ದು ಬರಿಯ ಕಡ್ಡಿಯಂತೆ ಕಾಣುತ್ತದೆ. ಅಂಡಗಳು ಅಸಂಖ್ಯ. ಫಲಸಂಪುಟ ಮಾದರಿಯದು. ನೀರುಗೋಣಿಸೊಪ್ಪಿನಲ್ಲಿ ಸುಮಾರು ಎಂಟು ಪ್ರಭೇದಗಳುಂಟು. ಇವುಗಳಲ್ಲಿ ಹಿಸೊಪಿಯಾಯ್ಡಿಸ್, ಸೆರೇಟ, ವೆರೊನಿಸಿಫೋಲಿಯ, ಪಾರ್ವಿಫ್ಲೋರ, ರೊಟಂಡಿಫೋಲಿಯ ಎಂಬವು ಮುಖ್ಯವಾದವು. ಸೆರೇಟ ಪ್ರಭೇದದ ರಸವನ್ನು ಶಕ್ತಿವರ್ಧಕವಾಗಿ ಬಳಸುವುದುಂಟು. 						
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ